ಆಲಿವ್ಸ್ ಬೆಟ್ಟಸಾಲು

ಜೆರೂಸಲೆಂನ ಪೂರ್ವಕ್ಕೆ ಸಮುದ್ರಮಟ್ಟಕ್ಕೆ 2,684 ಎತ್ತರದಲ್ಲಿದೆ. ಇದಕ್ಕೂ ಜೆರೊಸಲೆಂಗೂ ಮಧ್ಯೆ ಕಿಡ್ರಾನ್ ಕಣಿವೆ ಇದೆ. ಈ ಮಾರ್ಗವಾಗಿಯೇ ಡೇವಿಡ್ ಜೆರೊಸಲೆಂನಿಂದ ಓಡಿಹೋದನೆಂದು ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲೂ ಯೇಸು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದನೆಂದು ಹೊಸ ಒಡಂಬಡಿಕೆಯಲ್ಲೂ ಹೇಳಿದೆ. ಕ್ರೈಸ್ತ ಧರ್ಮಾವಲಂಬಿಗಳಿಗಾಗಿ ಇಲ್ಲಿ ಒಂದು ಆರಾಧನ ಮಂದಿರವನ್ನು ಕಟ್ಟಿಸಲಾಗಿತ್ತು. ಕಾಲಕ್ರಮೇಣ ಇದನ್ನು ಮಹಮದೀಯರು ಮಸೀದಿಯನ್ನಾಗಿ ಮಾರ್ಪಡಿಸಿದರು. ಬೆಟ್ಟದ ತಳಭಾಗದಲ್ಲಿ ಸ್ವಲ್ಪವೇ ದೂರದಲ್ಲಿರುವ ಶಿಲೆಯಿಂದ ನಿರ್ಮಿತವಾಗಿರುವ ಗುಹೆಯನ್ನು ಧರ್ಮೋಪದೇಶಕರ ಸಮಾಧಿ ಎಂದು ಕರೆಯುತ್ತಾರೆ.

ಸ್ಕೊಪಿಸ್ ಶಿಖರ ಆಲಿವ್ಸ್ ಬೆಟ್ಟಗಳ ಒಂದು ಭಾಗ. 1925ರಲ್ಲಿ ಇಲ್ಲಿ ಹೀಬ್ರೂ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. 1927ರ ಜುಲೈನಲ್ಲಾದ ಭೂಕಂಪದಿಂದ ಈ ಪ್ರದೇಶಕ್ಕೆ ಅಪಾರ ಹಾನಿಯುಂಟಾಯಿತು.			 
(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ